ಕನ್ನಡ ನಾಡು | Kannada Naadu

ಅಂಚೆ ಇಲಾಖೆ ಪ್ರಕಾಶಕ ಸ್ನೇಹಿ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ  – ಡಾ. ಪುರುಷೋತ್ತಮ ಬಿಳಿಮಲೆ

17 Mar, 2025

ಬೆಂಗಳೂರು: ಪ್ರಕಾಶಕರ ಪುಸ್ತಕ ರವಾನೆ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಮಗೆ ತಿಳಿಸಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ರವರು ಹೇಳಿದ್ದಾರೆ.  ಈ ಕುರಿತಂತೆ ಕೇಂದ್ರ ಸಂವಹನ ಸಚಿವಾಲಯದ ಅಂಚೆ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರು ತಮಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆಂದಿರುವ ಬಿಳಿಮಲೆ, ಕೇಂದ್ರ ಸರ್ಕಾರವು ಅಂಚೆ ಇಲಾಖೆಯ ಸೇವೆಗಳಲ್ಲಿ ತರ್ಕಸಮ್ಮತವಾದ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಸಮಾನ ರೀತಿಯ ಸೇವೆಗಳನ್ನು ಒಂದೇ ಸೂರಿನಲ್ಲಿ ತರುವ ಪ್ರಯತ್ನವನ್ನು ಮಾಡಿರುತ್ತದೆ.  ಹಾಗಾಗಿ ‘ಬುಕ್ ಪ್ಯಾಕೆಟ್’ ಪ್ರವರ್ಗವನ್ನು ಸ್ಥಗಿತಗೊಳಿಸಿ, ‘ಬುಕ್ ಪೋಸ್ಟ್’ ಪ್ರವರ್ಗದಡಿ ಈ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆಂದು ತಿಳಿಸಿದ್ದಾರೆ.  ‘ಇಂಡಿಯಾ ಪೋಸ್ಟ್ ಪಾರ್ಸಲ್’ ಎನ್ನುವ ಸೇವೆಗಳನ್ನು ಅಂಚೆ ಇಲಾಖೆಯು ಹೊರತಂದಿದ್ದು, ಸಗಟು ಪುಸ್ತಕ ಮಾರಾಟಗಾರರಿಗೆ ಇದು ಅತೀ ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆಂದು ಹೇಳಿರುವ ಬಿಳಿಮಲೆ, ಪುಸ್ತಕ ಪ್ರಕಾಶಕರು 2 ಕೆ.ಜಿ.ಯ ಗರಿಷ್ಠ ತೂಕದ ಪುಸ್ತಕಗಳನ್ನು ಈ ಸೇವೆಯಡಿ ಹಳೆಯ ಅಂಚೆ ದರದಲ್ಲಿಯೇ ಕಳುಹಿಸಿಕೊಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದನ್ನು ಪ್ರಕಾಶಕರು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ ಎಂಬ ಮಾಹಿತಿ ಒದಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಕೇಂದ್ರ ಸಂವಹನ ಖಾತೆ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧ್ಯ ರವರಿಗೆ ಪುರುಷೋತ್ತಮ ಬಿಳಿಮಲೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by